ಬಾಲಾಪಹರಣ - 
ಮಕ್ಕಳ ನ್ಯಾಯಬಾಹಿರ ಮತ್ತು ಬಲಾತ್ಕಾರ ಅಪಹರಣ. ಆಂಗ್ಲ ಭಾಷೆಯ ಕಿಡ್‍ನ್ಯಾಪ್ ಪದವನ್ನು ಹೀಗೆ ಅರ್ಥವಿಸುವುದುಂಟು. ಆದರೆ ಈ ಪದದ ನೇರ ಅರ್ಥಕ್ಕೂ ಮತ್ತು ಬಳಕೆಯಲ್ಲಿರುವ ಅರ್ಥವ್ಯಾಪ್ತಿಗೂ ವ್ಯತ್ಯಾಸವಿದೆ. ಬಾಲಾಪಹರಣಕ್ಕೆ ವ್ಯಪಹರಣವೆಂದೂ ಕರೆಯುತ್ತಾರೆ. ಬಲಾತ್ಕಾರ ಅಥವಾ ಮೋಸದಿಂದ ವ್ಯಕ್ತಿಯನ್ನು ಸ್ಥಳಾಂತರಿಸುವ ಅಪರಾಧವನ್ನು ಅಪಹರಣ ಎಂಬುದಾಗಿ ಭಾರತ ದಂಡಸಂಹಿತೆಯಲ್ಲಿ ಹೇಳಿದೆ. ಈ ಸಂಹಿತೆಯ ಮೇರೆಗೆ 'ವ್ಯಪಹರಣ' ಮತ್ತು 'ಅಪಹರಣ' ಇವು ಬೇರೆ ಬೇರೆ ನ್ಯಾಯಿಕ ಕಲ್ಪನೆಗಳು. ಭಾರತದ ಪ್ರಾಚೀನ ನ್ಯಾಯದಲ್ಲಿ ವ್ಯಪಹರಣ ಮತ್ತು ಅಪಹರಣಗಳಿಗೆ ವ್ಯತ್ಯಾಸವಿದ್ದಂತೆ ಕಂಡುಬರುವುದಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದ ಮೇರೆಗೆ ಕ್ರಿ.ಪೂ. ಅವಧಿಯಲ್ಲೂ ಅಪಹರಣವನ್ನು ಅಪರಾಧವೆಂದು ಗ್ರಹಿಸಿ ದಂಡ ವಿಧಿಸಲಾಗುತ್ತಿತ್ತು. ಯೂರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಪ್ರಾಚೀನ ಕಾಲದಲ್ಲಿ ಬಾಲಾಪಹರಣ ಒಂದು ಅಪರಾಧವೆಂದು ಪರಿಗಣಿಸುತ್ತಿದ್ದಂತೆ ತಿಳಿದು ಬರುವುದಿಲ್ಲ. ಆ ದೇಶಗಳಲ್ಲಿ ಧನದ ಆಸೆಗಾಗಿ ಬಾಲಾಪಹರಣ ಮಾಡಿರುವ ದಾಖಲೆಗಳಿವೆ. ನಾಲ್ಕಾರು ಶತಮಾನಗಳಿಂದೀಚೆಗೆ, ಬಾಲಾಪಹರಣವನ್ನು ಅಪರಾಧವೆಂದು ಪರಿಗಣಿಸಲಾಗುತ್ತಿದ್ದು, ಅದರ ಕಾನೂನುಬದ್ಧ ನ್ಯಾಯ ನಿರ್ದಿಷ್ಟ ಸ್ವರೂಪ ತಾಳಿದೆ.

ಬಾಲಾಪಹರಣ ದಂಡನೀಯ ಅಪರಾಧವಾಗಬೇಕಾದರೆ, ಭಾರತ ದಂಡ ಸಂಹಿತೆಯಲ್ಲಿ ನಿರೂಪಿಸಿರುವಂತೆ ಅಪರಾಧಿಕ ಸ್ವರೂಪ ಮತ್ತು ಲಕ್ಷಣಗಳ ವ್ಯಾಪ್ತಿಯಲ್ಲಿ ಬರಬೇಕು. 1860ರ ಭಾರತ ದಂಡಸಂಹಿತೆಯ 359, 360 ಮತ್ತು 361ನೆಯ ಪ್ರಕರಣಗಳಲ್ಲಿ ಬಾಲಾಪಹರಣದ ಬಗೆಗೆ ವಿವರಣೆ ಇದೆ. ವಿವಿಧ ಉದ್ದೇಶಗಳಿಗಾಗಿ ಮಾಡುವ ಬಾಲಾಪಹರಣ ಮತ್ತು ಆ ಸಂಬಂಧದಲ್ಲಿ ವಿಧಿಸಬಹುದಾದ ದಂಡಗಳನ್ನು ಉಲ್ಲೇಖಿಸಲಾಗಿದೆ. ಎರಡು ಬಗೆಯ ಬಾಲಾಪಹರಣಗಳು ಇವೆ. ಮಕ್ಕಳ ಸಮ್ಮತಿಯಿಲ್ಲದೆ ಅಥವಾ ಅವರ ಪರವಾಗಿ ಅಧಿಕೃತವಾಗಿ ಸಮ್ಮತಿಸಬಹುದಾದವರ ಸಮ್ಮತಿಯಿಲ್ಲದೆ ಭಾರತದ ಗಡಿಯಾಚೆ ಸಾಗಿಸುವುದು ಒಂದು ಬಗೆ. ಹದಿನಾರು ವರ್ಷ ಮೀರದ ಅಪ್ರಾಪ್ತ ವಯಸ್ಕನನ್ನು ಅಥವಾ ಹದಿನೆಂಟು ವರ್ಷ ಮೀರದವಳನ್ನು ಅಥವಾ ಅಸ್ವಸ್ಥ ಚಿತ್ತದ ವ್ಯಕ್ತಿಯನ್ನು ಅಂಥವರ ಅಧಿಕೃತ ಸಂರಕ್ಷಕರ ರಕ್ಷಣೆಯಿಂದ, ಅಂಥ ಸಂರಕ್ಷಕರ ಸಮ್ಮತಿ ಇಲ್ಲದೆಯೇ ಕರೆದುಕೊಂಡು ಹೋಗುವುದು ಅಥವಾ ಆಸೆ ತೋರಿಸಿ ಆಕರ್ಷಿಸಿ ಕರೆದುಕೊಂಡು ಹೋಗುವುದು ಇನ್ನೊಂದು ಬಗೆ. ಸಮ್ಮತಿ ಇಲ್ಲದೆ ಗಡಿಯಾಚೆ ಸಾಗಿಸಿರುವ ಬಾಲಾಪಹರಣದ ಪ್ರಕರಣದಲ್ಲಿ ವ್ಯಪಹರಣಕ್ಕೆ ಗುರಿಯಾದವರು ಸ್ತ್ರೀ, ಪುರುಷ, ವಯಸ್ಕ, ಅಪ್ರಾಪ್ತವಯಸ್ಕ ಅಥವಾ ಯಾವುದೇ ವ್ಯಕ್ತಿ ಆಗಿರಬಹುದು. ಆದರೆ ಎರಡನೆಯ ಬಗೆಯ ಬಾಲಾಪಹರಣದ ಪ್ರಕರಣಗಳಲ್ಲಿ ವ್ಯಪಹರಣಕ್ಕೆ ಗುರಿಯಾದ ವ್ಯಕ್ತಿಗಳು ಅಪ್ರಾಪ್ತ ವಯಸ್ಸಿನವರು ಅಥವಾ ಅಸ್ವಸ್ಥ ಚಿತ್ತದವರು ಆಗಿರಬೇಕು.

ಪಾಶ್ಚಾತ್ಯದೇಶಗಳಲ್ಲಿ ಹಣದ ಆಸೆಗಾಗಿ ಬಾಲಾಪಹರಣ ಮಾಡಲಾಗುತ್ತಿತ್ತು. ದ್ವೇಷ ಮತ್ತು ರಾಜಕೀಯ ಕಾರಣಗಳಿಗಾಗಿಯೂ ಬಾಲಾಪಹರಣಗಳಾಗುತ್ತಿದ್ದುವು. ಈ ಪ್ರಕರಣಗಳು ಹೆಚ್ಚಾದ ಪ್ರಯುಕ್ತ ಅವನ್ನು ಅಪರಾಧವೆಂದು ಪರಿಗಣಿಸಿ, ದಂಡಿಸುವ ನ್ಯಾಯ ಆಚರಣೆಗೆ ಬಂತು. ಈ ಬಗ್ಗೆ ಭಾರತದಲ್ಲಿಯೂ ನ್ಯಾಯರಚನೆ ಆಯಿತು. 1860ರಿಂದ ಈ ನ್ಯಾಯದಲ್ಲಿ ಮಾರ್ಪಾಡುಗಳು ಆಗಿವೆ. ಭಾರತ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತ ದಂಡ ಸಂಹಿತೆ ಇವುಗಳಲ್ಲಿ ಈ ಅಪರಾಧಗಳ ಸಂಬಂಧದ ಪ್ರಕ್ರಿಯಾ ನ್ಯಾಯ ಮತ್ತು ದಂಡಗಳನ್ನು ಕುರಿತು ಉಪಬಂಧಗಳು ಇವೆ. ಒಟ್ಟಿನಲ್ಲಿ ಯಾವುದೇ ಕಾರಣಕ್ಕಾಗಿ ಮಾಡುವ ಬಾಲಾಪಹರಣ ಒಂದು ಅಪರಾಧ ಎಂಬುದನ್ನು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಅಂಗೀಕರಿಸಿವೆ.
(ಎಲ್.ಎಸ್.ಜೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ